ಕಾಂತಾಮಣಿಯ ಕನಸುಗಳು: ಕೌಟುಂಬಿಕ ದೃಷ್ಟಿಕೋನದ ಕಥೆಗಳು
ಕಾಂತಾಮಣಿಯ ಕನಸುಗಳು
ಲೇ: ಪ್ರೊ. ಕೃಷ್ಣ ನಾಯಕ
ಪುಟ:೯೬, ಬೆಲೆ:೧೦೦/-
ಪ್ರಕಾಶನ: ಕನ್ನಡನಾಡು ಲೇಖಕರು ಮತ್ತು
ಓದುಗರ ಸಹಕಾರ ಸಂಘ, ಕಲಬುರಗಿ
ಪ್ರೊ. ಕೃಷ್ಣನಾಯಕ ನವ್ಯೋತ್ತರ ಕನ್ನಡದ ಪ್ರಮುಖ ಕಥೆಗಾರರಲ್ಲೊಬ್ಬರು. ಜೀವನ ಮೌಲ್ಯಗಳ ವಿಮರ್ಶೆ, ತಾತ್ವಿಕ ಜಿಜ್ಞಾಸೆ, ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯ ಅವಲೋಕನದ ಆಶಯದ ಕೆಲಸವನ್ನು ಓದುಗರಿಗೆ ಭಾರವಾಗದ ರೀತಿಯಲ್ಲಿ ನಿರ್ವಹಿಸುತ್ತ ನವೋತ್ತರ ಕನ್ನಡ ಸಣ್ಣಕಥೆಯ ಚೌಕಟ್ಟನ್ನು ಅವರು ವಿಸ್ತರಿಸುತ್ತ ಬಂದಿದ್ದಾರೆ. ಕಳೆದ ಮೂರು ದಶಕಗಳಿಂದ ಕಥೆಗಳನ್ನು ಬರೆಯುತ್ತ ಬಂದಿರುವ ಕೃಷ್ಣ ನಾಯಕ ತಮ್ಮ ಬರಹದ ಪ್ರಾಮಾಣಿಕತೆ, ಪ್ರಬುದ್ಧತೆ ಮತ್ತು ಕಲಾತ್ಮಕತೆಗಾಗಿ ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಲೇಖಕರೆಂದು ಗುರುತಿಸಿಕೊಂಡಿದ್ದಾರೆ.
‘ಕಾಂತಾಮಣಿಯ ಕನಸುಗಳು’ ಪ್ರೊ. ಕೃಷ್ಣನಾಯಕರ ನಾಲ್ಕನೇ ಕಥಾಸಂಕಲನ. ಈ ಸಂಕಲನ ಏಳು ಕಥೆಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಗ್ರಾಮೀಣ ಪ್ರದೇಶ ಮತ್ತು ತಾಂಡಾಗಳ ಅನುಭವದ್ರವ್ಯವನ್ನು ಒಳಗೊಂಡಿವೆ. ಮನುಷ್ಯ ಸಂಬಧಗಳಲ್ಲಿನ ಕ್ಲಿಷ್ಟತೆ, ಅನಾಥ ಪ್ರಜ್ಞೆ, ಮನುಷ್ಯನ ನಿಜ ವ್ಯಕ್ತಿತ್ವದ, ಚಹರೆಯ ಅರಸುವಿಕೆ, ಉಳ್ಳವರು-ಬಡವರ ನಡುವಿನ ಅಂತರ, ವಿಷಮ ದಾಂಪತ್ಯ, ಹಾದರ, ಬಡತನ, ಹತಾಶೆ, ಅಸಹಾಯಕತೆ -ಮೊದಲಾದವುಗಳು ಕೃಷ್ಣ ನಾಯಕರ ಕಥೆಗಳ ಹಂದರವನ್ನು ರೂಪಿಸಿವೆ. ಅವರ ಕಥನ ತಂತ್ರದಲ್ಲಿ ವೈವಿಧ್ಯವಿದೆ. ಮಹಿಳೆಯ ಅಂತರಗದ ಶೋಧನೆ ಹೆಚ್ಚಿನ ಕಥೆಗಳಲ್ಲಿ ಕಂಡುಬರುವ ಸ್ಥಾಯಿ ಭಾವ. ನಾಯಕರ ಕಥೆಗಳು ಭಾಷೆ ಹಾಗೂ ವಸ್ತುವಿನ ದೃಷ್ಟಿಯಿಂದ ಕನ್ನಡ ಕಥಾಲೋಕದಲ್ಲಿಯೇ ವಿಶಿಷ್ಟವಾಗಿ ಕಾಣಿಸುತ್ತವೆ. ಅವರು ಕಟ್ಟಿಕೊಡುವ ಜೀವನಾನುಭವ ಗಮನಿಸುವಂತಹದ್ದಾಗಿದೆ. ಕನ್ನಡ ಸಾಹಿತ್ಯಕ್ಕೆ ಅಪರಚಿತವಾಗಿದ್ದ ಲಂಬಾಣಿ ಜನಾಂಗದ ಬದುಕಿನ ನೋವು-ನಿರಾಶೆಗಳನ್ನು, ಸುಖ-ದುಃಖಗಳನ್ನು, ಸೋಲು-ಗೆಲುವುಗಳನ್ನು ನಾಯಕರು ಕಳೆದ ಮೂರು ದಶಕಗಳಿಂದ ಪರಿಚಯಿಸುತ್ತಿದ್ದಾರೆ. ಈ ಮೂವತ್ತು ವರ್ಷಗಳಲ್ಲಿ ಅವರು ಬರೆದದ್ದು ಮೂವತ್ತೆಂಟೇ ಕಥೆಗಳು. ಅವರ ಕಥೆಗಳು ಓದುಗರನ್ನು ತಲ್ಲಣಗೊಳಿಸುತ್ತವೆ, ಉಸಿರುಕಟ್ಟಿಸುತ್ತವೆ. ಆದರೆ ಆ ಆವರಣದಲ್ಲಿ ಉಳಿಯಬಯಸುವ ಮಾನವೀಯ ಭಾವನೆಗಳು, ಅಲ್ಲಿಯ ಅನುಭವ ಪ್ರಾಮಾಣಿಕತೆ ಅಂತಃಕರಣವನ್ನು ತಟ್ಟುತ್ತದೆ.
ಲೇಖಕ ಪ್ರೊ. ಕೃಷ್ಣ ನಾಯಕ
ಸಂಕಲನದ ಶೀರ್ಷಿಕೆ ಕಥೆಯಾದ ‘ಕಾಂತಾಮಣಿಯ ಕನಸುಗಳು’ ಮಧ್ಯಮವರ್ಗದ ಮಹಿಳೆಯ ದುರಂತ ಜೀವನಚಿತ್ರಣವನ್ನು ಕಟ್ಟಿಕೊಡುತ್ತದೆ. ಕಥಾನಾಯಕಿ ಕಾಂತಾಮಣಿಯ ದುಃಖ, ಅಸಹಾಯಕತೆಗಳು ಮಹಿಳೆಯ ಶತಮಾನಗಳ ಶೋಷಣೆಗೆ ಸಾಕ್ಷಿಯಂತಿವೆ. ಗ್ರಾಮೀಣ ಜೀವನದೊಳಗೆ ಆಸ್ತಿ ಹಾಗೂ ಹಣದಿಂದಾಗಿ ವ್ಯವಸ್ಥೆಯ ಪ್ರತಿರೂಪವೇ ಆದಂತಹ ಶಕ್ತಿಗಳು ನಿರ್ಮಿಸುವ ಒಂದು ಸುಲಭ ವಿವರಣೆಗೆ ದಕ್ಕದ ಶೋಷಣಾಮಯ ಸನ್ನಿವೇಶವನ್ನು, ಅದರೊಳಗೆ ಸಿಲುಕಿ ಅದರಿಂದ ಹೊರಬರಲಾಗದೆ ನರಳುವ-ಸಾಯುವ ವ್ಯಕ್ತಿಗಳನ್ನು ಈ ಕಥೆ ಅನಾವರಣಗೊಳಿಸುತ್ತದೆ. ಭಾರತೀಯ ಸಮಾಜದಲ್ಲಿ ಮಹಿಳೆ ಎರಡನೇ ದರ್ಜೆ ಪ್ರಜೆಯಾಗಿ ಯಾಂತ್ರಿಕ ಬದುಕು ನಡೆಸುತ್ತಲೇ ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಅದಮಿಟ್ಟು, ಸಾಮಾಜಿಕ ಅನಿಷ್ಟಗಳಿಗೆ ಬಲಿಯಾಗುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಶಿಕ್ಷಣ, ವಿವಾಹ, ಆಡಳಿತ, ಕಾನೂನು ಮತ್ತು ಉದ್ಯೋಗಗಳೆಲ್ಲವೂ ಗಂಡಿಗೊದು ರೀತಿ ಹೆಣ್ಣಿಗೊಂದು ರೀತಿ ಇರುವುದು ಕಂಡುಬರುತ್ತದೆ. ಈ ಕಥೆಯಲ್ಲಿ ಜೀವನನಿಷ್ಠೆಯಿದೆಯೇ ಹೊರತು, ಬಂಡಾಯದ ದನಿಯಿಲ್ಲ. ಕಥಾನಾಯಕಿ ಕಾಂತಾಮಣಿ ಇಪ್ಪತ್ತನೇ ಶತಮಾನದ ಗಡಿರೇಖೆಯನ್ನು ದಾಟುವುದಿಲ್ಲ; ಪ್ರಗತಿಪರ ಸಾಮಾಜಿಕ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳುವುದಿಲ್ಲ. ಅವಳು ಭಾರತದ ಸನಾತನ ಸಂಪ್ರದಾಯಗಳ ಕ್ರೌರ್ಯ ಮತ್ತು ಅಂಧ ಸಾಮಾಜಿಕ ಶೋಷಣೆಗಳಿಗೆ ಬಲಿಯಾಗುತ್ತಾಳೆ. ಕಥೆಯುದ್ದಕ್ಕೂ ಲೇಖಕರು ಕಾಂತಾಮಣಿಯ ಮುಗ್ಧ ಮನಸ್ಸು ಮತ್ತು ಆಸೆ-ಆಕಾಂಕ್ಷೆಗಳನ್ನು ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ.
ವಾಸ್ತವತೆಗಳ ಎದುರಿನಲ್ಲಿ ಮಹಿಳೆಯ ಭಾವಪ್ರಪಂಚದ ಸಂಕೀರ್ಣ ಆಯಾಮಗಳ ಶೋಧನೆಯ ಪ್ರಯತ್ನವಿರುವ ‘ಕಾಲನ ಕೀಳು ಮನ’ ಕಥೆ ಗಾಢ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗುತ್ತದೆ. ವಿಫಲ ಪ್ರೀತಿ, ವಿವಾಹ, ತಾಯ್ತನ, ಉದ್ಯೋಗ, ಯಾತನೆ, ಪ್ರೀತಿಯಲ್ಲಿನ ವಂಚನೆ-ನಿರಾಶೆಗಳು, ಗಂಡ-ಮಗಳನ್ನು ಕಳೆದುಕೊಂಡ ರತ್ನಾ ವಿವಿಧ ನೆಲೆಗಳಲ್ಲಿ ಅವಳ ಬದುಕಿನ ಕಥೆಯನ್ನು ಸೂಕ್ಷö್ಮ ದೃಷ್ಟಿಯಲ್ಲಿ ಅವಲೋಕಿಸಿ ಹೆಣೆದಿರುವ ಕಥೆ ತೀವ್ರವಾದ ಪರಿಣಾಮವನ್ನುಂಟು ಮಾಡುತ್ತದೆ. ಕಥಾನಾಯಕಿಯ ಪ್ರಜ್ಞೆಯಲ್ಲಿ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ರತ್ನಾಳಿಗೆ ಕಾಡುವ ನೆನಪುಗಳಿವೆ. ಅವಳು ಎದುರಿಸುವ ಸಮಸ್ಯೆಗಳು ತುಂಬಾ ಸಂಕೀರ್ಣವಾಗಿವೆ. ಪುರುಷಪ್ರದಾನ ಸಂಸ್ಕೃತಿಯ ವೈರುಧ್ಯಗಳಿಂದ, ಊಳಿಗಮಾನ್ಯ ಸಂಸ್ಕೃತಿಯ ಹಿಡಿತಗಳಿಂದ ಇಲ್ಲಿಯ ರತ್ನಾ ಶೋಷಣೆಗೊಳಗಾದರೂ ಇದ್ದ ಬದುಕಿನಲ್ಲಿಯೇ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವುದು, ಜೀವನದಿಯಾಗಿ ಹರಿದು ಬದುಕಿಗಾಗಿ ಹಾತೊರೆಯುವುದು ಕುತೂಹಲಕಾರಿಯಾಗಿದೆ. ರತ್ನಾಳ ತುಡಿತ, ತಲ್ಲಣ ಮತ್ತು ತಳಮಳಿಗೆ ಈ ಕಥೆ ದನಿ ನೀಡಿದ್ದರೂ ಭಾವುಕ ನೆಲೆಯಲ್ಲಷ್ಟೇ ಅನಾವರಣಗೊಳ್ಳುತ್ತದೆ; ಜೊತೆಗೆ, ಸಮಸ್ಯೆಗಳಿಗೆ ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಥ ಸಹೃದಯತೆಯ ಚೌಕಟ್ಟೂ ಈ ಕಥೆಗಿದೆ. ನಮ್ಮದೇ ನರೆಹೊರೆಯ ಕಥೆಯಂತೆ ಆಪ್ತವೂ ಆಗುತ್ತದೆ. ಸರಳ ಕಥೆಯೊಳಗಿರುವ ಗಂಭೀರ ಆಶಯಗಳು ಬದುಕಿಗೆ ಸಕಾರಾತ್ಮಕ ದೃಷ್ಟಿಯನ್ನು ನೀಡುವಂತಹದ್ದಾಗಿವೆ. ಮನುಷ್ಯ ಸಂಬಧಗಳಲ್ಲಿನ ಕ್ಲಿಷ್ಟತೆ, ಅನಾಥ ಪ್ರಜ್ಞೆ ಮತ್ತು ದಿನನಿತ್ಯದ ಬದುಕಿನ ಏಕತಾನತೆಗಳು ಈ ಕಥೆಯಲ್ಲಿ ಮಡುಗಟ್ಟಿವೆ.
ವಿಮರ್ಶಕ ಸಿ. ಎಸ್. ಭೀಮರಾಯ
ಧರಮಣ್ಣನ ಜೀವನ ವೃತ್ತಾಂತವನ್ನು ಹೇಳುವ ‘ಧರಮಣ್ಣ’ ಕಥೆ ತನ್ನ ಸಣ್ಣಕಥೆಗಳ ವ್ಯಾಪ್ತಿಯನ್ನು ಮೀರಿ ಬೆಳೆದಿದೆಯೋ ಎನ್ನುವ ಹಂತಕ್ಕೆ ಬರುವಾಗಲೇ ನಿಂತು ಕಥೆಗಾರನ ಬರಹದ ಮೇಲಿನ ಹಿಡಿತವನ್ನು ಸೂಕ್ಷö್ಮವಾಗಿ ಚಿತ್ರಿಸುತ್ತದೆ. ಧರಮಣ್ಣನ ತಾಯಿ ನೆರೆಮನೆ ಹುಡುಗನೊಂದಿಗೆ ಓಡಿಹೋಗುವುದು, ಅವನು ಬಾಲ್ಯದಲ್ಲಿಯೇ ಅನಾಥನಾಗುವುದು, ಧರಮಣ್ಣ ಗೌಡರ ಮನೆಯಲ್ಲಿ ಜೀತಕ್ಕೆ ಇರುವುದು, ಮಲತಾಯಿ ಅವನಿಗೆ ಮೋಸ ಮಾಡುವುದು, ಅವನು ಹೆಂಡತಿಯನ್ನು ಕಳೆದುಕೊಂಡು ಭಿಕ್ಷÄಕನಾಗುವುದು, ಧರಮಣ್ಣ ಪಾಪಪ್ರಜ್ಞೆಯಿಂದ ಬಳಲುವುದು, ಅವನು ಕಾಲುವೆಯಲ್ಲಿ ಮುಳುಗಿಹೋಗುವುದು -ಹೀಗೆ ಮೊದಲಾದ ವಾಸ್ತವ ಘಟನೆಗಳನ್ನು ಕಥೆಯಾಗಿಸುವಾಗ ಕಥೆಗಾರ ತೋರಿಸುವ ಆಸ್ಥೆ ಗಮನಾರ್ಹವಾದದ್ದು. ಇಲ್ಲಿನ ಕಥನ ತಂತ್ರ ಹೊಸದಾಗಿದ್ದು, ಅವನ ಪರಿಚಯದ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸುವ ಮೂಲಕ ಕಥೆ ವಿಸ್ತಾರವಾಗುತ್ತ ಹೋಗುತ್ತದೆ. ಮಾಳಪ್ಪ, ಚಂದಪ್ಪ, ಧರೆಪ್ಪ ಮತ್ತು ಗುಜ್ಜಣ್ಣ ಧರಮಣ್ಣನ ಕುರಿತು ಕಥೆ ಹೇಳಿದ್ದಾರೆ. ಧರಮಣ್ಣನ ಅಂತರಗವನ್ನು ಸಮರ್ಥವಾಗಿ ಹಿಡಿದಿಡುವ ಲೇಖಕರ ಕಥನ ಸಾಮರ್ಥ್ಯ ಮತ್ತು ಪ್ರಬುದ್ಧವಾದ ನಿರೂಪಣೆಗೆ ಈ ಕಥೆ ಉತ್ತಮ ನಿದರ್ಶನವಾಗಿದೆ.
ರೈತ ಹೇಮು ನಾಯಕ ಮತ್ತು ನರ್ತಕಿ ಮಾನಸಿಯರ ನಡುವಿನ ಅನೈತಿಕ ಸಂಬಧದ ಪರಿಣಾಮಗಳನ್ನು ‘ತೋಟದ ಮನೆ’ ಕಥೆ ಅನಾವರಣಗೊಳಿಸುತ್ತದೆ. ಹೇಮು ನಾಯಕ ಮತ್ತು ಮಾನಸಿಯರ ಅನೈತಿಕ ಸಂಬಧಗಳಲ್ಲಿ ಸೂಕ್ಷö್ಮ ಸಂಗತಿಗಳು ಹೆಣೆದುಕೊಂಡು ಕಥೆಯ ಸನ್ನಿವೇಶಗಳನ್ನು ಸಂಕೀರ್ಣಗೊಳಿಸಿವೆ. ಕ್ರೌರ್ಯ, ವೈಷಮ್ಯ, ವಿಷಾದ, ಕಾಮಪಿಪಾಸೆ, ದುರಂತ, ಕೊಲೆ-ಇತ್ಯಾದಿಗಳು ಕಥೆಯಲ್ಲಿ ಪ್ರಖರವಾಗಿ ಬಿಂಬಿತವಾಗಿವೆ. ವಾಸ್ತವದಲ್ಲಿ ವ್ಯವಸ್ಥೆ ಹೆಣೆಯುತ್ತಿರುವ ಬಲೆಯನ್ನು ಕಥೆಯ ಮೂಲಕ ಹೆಣೆದ ಬಗೆ ಉಲ್ಲೇಖಾರ್ಹ. ‘ಕಾಮ’ ಈ ಕಥೆಯ ಕಥಾವಸ್ತುವಿನ ಪ್ರಮುಖ ಭಾಗವಾಗಿಯೇ ಬಂದಿದೆ. ಹೇಮು ನಾಯಕ-ಮಾನಸಿಯರ ನಡುವೆ ನಡೆಯುವ ಇಲ್ಲಿನ ‘ಕಾಮ’ದ ಕ್ರಿಯೆ ಭಾರತೀಯ ಕೌಟುಂಬಿಕ ಸಿದ್ಧ ಚೌಕಟ್ಟನ್ನು ಮುರಿದು ಮುಕ್ತವಾಗಿ ಹರಿದಾಡುತ್ತದೆ. ಹೀಗೆ ಇದು ಒಂದು ಚೌಕಟ್ಟನ್ನು ಮುರಿದು ಮುಕ್ತ ಚಲನೆಯಾದಾಗ ಉಂಟಾಗುವ ಸಂಘರ್ಷಗಳನ್ನು ಈ ಕಥೆ ಸೊಗಸಾಗಿ ಕಟ್ಟಿಕೊಡುತ್ತದೆ. ಹೇಮು ನಾಯಕ-ಮಾನಸಿ ಸಂಬಧ ಕಾಮಪ್ರಧಾನವಾಗಿಯೇ ರೂಪಿತವಾಗಿದೆ. ಒಳ್ಳೆಯ ಸಮಾಜ ನಿರ್ಮಾಣವಾಗಬೇಕೆಂದರೆ ಕೌಟುಂಬಿಕ-ಮನುಷ್ಯ ಸಂಬಧಗಳು ಸಹಜವಾಗಿರುವುದು ಅಗತ್ಯ.
‘ಅಂಬರದ ತಾರೆ’ ವಿಧವೆ ಕಾಶಿಬಾಯಿಗೆ ಬಾಳು ಕೊಡಲು ಮುಂದಾಗುವ ಖೇಮಶೆಟ್ಟಿ ಮಾಸ್ತರನ ಆದರ್ಶ ಗುಣವನ್ನು ಚಿತ್ರಿಸುವ ಕಥೆ. ಈ ಕಥೆಯಲ್ಲಿ ಖೇಮಶೆಟ್ಟಿ ಮೇಷ್ಟçನ್ನೂ, ಥಾವರಸಿಂಗ ನಾಯಕನನ್ನೂ ಕಥೆಗಾರ ಚಿತ್ರಿಸಿದ ಬಗೆ ವಿಭಿನ್ನ. ಇದು ಮನುಷ್ಯ ಜೀವಿಗಳ ಪ್ರೇಮದ ಆಲಾಪ ಮಾತ್ರವಲ್ಲ, ಮನುಷ್ಯನಿಗೆ ಅಗತ್ಯವಾದ ಸಹಜವಾದ ಕ್ರಿಯೆ ಎಂಬುದನ್ನು ತೋರುತ್ತದೆ. ಖೇಮಶೆಟ್ಟಿ ವಿಧವೆ ಕಾಶಿಬಾಯಿಯನ್ನು ಮದುವೆಯಾಗುವುದರ ಮೂಲಕ ಸಮಾಜದ ಜಾತಿಯ ಕಟ್ಟುಪಾಡನ್ನು ಮೀರುತ್ತಾನೆ. ಕಥೆಯಲ್ಲಿನ ಖೇಮಶೆಟ್ಟಿ ಮೇಷ್ಟುç-ಥಾವರಸಿಂಗ ಪಾತ್ರಗಳು ಓದುಗರ ಮನಸ್ಸಿನಲ್ಲಿ ಬಹು ಕಾಲ ಉಳಿಯುವಂಥವು.
ಕುಟುಬದ ಕೋಟಲೆಗಳೊಳಗೆ ಬೇಯುವ ಮಹಿಳೆಯರಲ್ಲದೆ ವಿಭಿನ್ನ ಸಂವೇದನೆಗಳ ಮಹಿಳಾ ಪಾತ್ರಗಳೂ ಈ ಸಂಕಲನದಲ್ಲಿ ಅನಾವರಣಗೊಂಡಿವೆ. ‘ಭೂರಿಯಮ್ಮ’ ಕಥೆಯಲ್ಲಿಯನ ದುಡಿಯುವ ಮಹಿಳೆ ಭೂರಿಯಮ್ಮ.ನ ಚೈತನ್ಯ. ‘ಕಾಲನ ಕೀಳು ಮನ’ದ ಕಥೆಯಲ್ಲಿನ ಸ್ವಾಭಿಮಾನಿ ರತ್ನಾ ಪಾತ್ರಗಳು ಸಮಕಾಲೀನ ಜಗತ್ತಿನ ವೈರುಧ್ಯಗಳನ್ನು ಕಟ್ಟಿಕೊಡುತ್ತವೆ.
ವಾತ್ಸಲ್ಯದ ವ್ಯಾಖ್ಯೆಗೆ ಕಾವ್ಯಾತ್ಮಕ ಪರಿವೇಶವೊಂದನ್ನು ನಿರ್ಮಿಸಿ ಓದುಗರನ್ನು ವಿಷಾದದಲ್ಲಿ ಅದ್ದಿ ತೆಗೆಯುವ ಕಥೆ ‘ಭೂರಿಯಮ್ಮ’. ಕಥೆಯು ಭೂರಿಯಮ್ಮನಲ್ಲಿ ಸುಪ್ತವಾಗಿರುವ ಅದಮ್ಯ ಶಕ್ತಿಯನ್ನು ಗುರುತಿಸುತ್ತದೆ. ಕಥಾನಾಯಕಿ ಭೂರಿಯಮ್ಮನ ನಿಸ್ವಾರ್ಥ ಸೇವೆ, ಜ್ಞಾನ, ತ್ಯಾಗ, ಜೀವನ ಪ್ರೀತಿ, ಮತ್ತು ಸಹಾಯ ಗುಣಗಳು ವಿಶಿಷ್ಟ ಅನುಭವವನ್ನು ಕಟ್ಟಿಕೊಡುವಲ್ಲಿ ಕಥೆ ಯಶಸ್ವಿಯಾಗಿದೆ. ಹಾಗೆಯೇ ಇದು ತಲೆಮಾರುಗಳ ಅಂತರವನ್ನು, ಹೊಂದಾಣಿಕೆಯ ಕೊರತೆಯನ್ನು ತೀರಾ ಸರಳವಾಗಿ ಹೇಳುವ ಕಥೆ. ತಂತ್ರಜ್ಞಾನ ಯುಗದಲ್ಲಿ ದೇಸೀ ಔಷಧಿ ಜ್ಞಾನ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂಬುದಕ್ಕೆ ಭೂರಿಯಮ್ಮ ಮಾಡುವ ಕೆಲಸಗಳೇ ಸಾಕ್ಷಿಯಾಗಿವೆ. ಕಥೆಯ ನಿರೂಪಣೆ ಅತಿ ಭಾವುಕವಾಗದಂತೆ ನೋಡಿಕೊಂಡಿರುವುದು ಕಥೆಗಾರರ ಯಶಸ್ಸಾಗಿದೆ.
ಭೂತದ ಅರ್ಥವನ್ನು ವರ್ತಮಾನದಲ್ಲಿ ತಾಳೆ ನೋಡಲು ಹೊರಡುವ ಸಂಕಲನದ ಹಲವು ಕಥೆಗಳು ಸಮಕಾಲೀನವಾಗಿ ಎದುರಿಸುವ ತಲ್ಲಣಗಳನ್ನು ವಿಶ್ಲೇಷಿಸುತ್ತವೆ. ‘ಕಾಂತಾಮಣಿಯ ಕನಸುಗಳು’, ‘ಕಾಲನ ಕೀಳು ಮನ’, ‘ತೋಟದ ಮನೆ’, ‘ಅಂಬರದ ತಾರೆ’, ‘ಭೂರಿಯಮ್ಮ’ ಕಥೆಗಳು ಈ ದಿಕ್ಕಿನಲ್ಲಿ ಮುಖ್ಯವಾಗುತ್ತವೆ. ಇವು ವಾಸ್ತವ ಪ್ರಜ್ಞೆಯ ಪ್ರತಿರೂಪಗಳೇ ಆಗಿರುವುದರಿಂದ ಓದುಗರ ಗಮನವನ್ನು ವಿಶೇಷವಾಗಿ ಸೆಳೆಯುತ್ತವೆ. ಈ ಕಥೆಗಳಲ್ಲಿ ಮಹಿಳಾ ಸಾಧ್ಯತೆಗಳು ಸಹಜವಾದ ರೀತಿಯಲ್ಲಿ ಚಿತ್ರಿತವಾಗಿವೆ. ಇಲ್ಲಿಯ ಅನೇಕ ಕಥೆಗಳಲ್ಲಿ ಮಹಿಳೆಯೇ ಕೇಂದ್ರಬಿದುವಾಗಿದ್ದಾಳೆ.
ಮನುಷ್ಯನ ನಂಬಿಕೆ, ಸ್ನೇಹ, ಪ್ರೀತಿ ಮತ್ತು ವಿಶ್ವಾಸಗಳಲ್ಲಿನ ಭಾವನಾತ್ಮಕ ತುಡಿತವನ್ನು ‘ಚಾಂದ ಪಟೇಲ’ ಕಥೆ ಪ್ರದರ್ಶಿಸುತ್ತದೆ. ಹಣ-ಆಸ್ತಿಗಳಿಗಿಂತ, ಸ್ನೇಹ-ಮಾನವೀಯತೆಗಳು ಮುಖ್ಯವೆಂಬ ಸಂದೇಶ ಈ ಕಥೆಯಲ್ಲಿದೆ. ಪ್ರಾಪಂಚಿಕ ಅಡಚಣೆಯಿಂದ ಚಾಂದ ಪಟೇಲ ಫಲವತ್ತಾದ ಜಮೀನನ್ನು ಧರಿಪುರ ತಾಂಡ್ಯದ ಧನಿಕನಾದ ರುಮಕೋಟಿ ನಾಯಕನಿಗೆ ಮಾರಾಟ ಮಾಡುವುದು, ಈ ಘಟನೆಯಿಂದ ಚಾಂದ ಪಟೇಲನ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗುವುದು, ಚಾಂದ ಪಟೇಲ ಮತ್ತು ಅವನ ಹೆಂಡತಿ ರುಮಕೋಟಿ ನಾಯಕನ ಹತ್ತಿರ ಬಂದು ತಮ್ಮ ದುಃಖ ತೋಡಿಕೊಳ್ಳುವುದು, ಅವರ ಈ ದುಃಖವನ್ನು ಅರಿತ ರುಮಕೋಟಿ ನಾಯಕ ಅವರ ಜಮೀನನ್ನು ಮತ್ತೆ ಅವರಿಗೆ ಮರಳಿ ಕೊಡುವುದು, ಕಥೆಯೊಳಗಿನ ಈ ನಾಲ್ಕೂ ಪ್ರಮುಖ ಘಟನೆಗಳು ಗ್ರಾಮೀಣ ಪ್ರದೇಶದ ಸಾಮಾಜಿಕ-ವ್ಯಾವಹಾರಿಕ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತವೆ. ಈ ಕಥೆಯಲ್ಲಿ ನಾಟಕೀಯ ತಿರುವುಗಳಿದ್ದು ಕಥೆ ಗಟ್ಟಿಯಾಗಿದೆ. ಗ್ರಾಮೀಣ ಬದುಕಿನ ಜೀವನಾನುಭವ ಹೊಂದಿರುವ ನಾಯಕರು ಈ ಕಥೆಯಲ್ಲಿ ಯಶಸ್ಸು ಕಂಡಿದ್ದಾರೆ.
ಈ ಸಂಕಲನದಲ್ಲಿನ ‘ಕಾಂತಾಮಣಿಯ ಕನಸುಗಳು,’ ‘ಕಾಲನ ಕೀಳು ಮನ’, ‘ಧರಮಣ್ಣ’, ‘ತೋಟದ ಮನೆ’, ‘ಅಂಬರದ ತಾರೆ’ ಮೊದಲಾದ ಕಥೆಗಳಲ್ಲಿ ಬದುಕಿನ, ಮನುಷ್ಯನ ಸ್ವರೂಪ-ಸ್ವಭಾವ-ಸಂಬಧಗಳನ್ನು ಕುರಿತು ತಾತ್ವಿಕಶೋಧ ಇದೆ. ಸಣ್ಣ ಕಥೆಗಳಿಗೇ ಅನನ್ಯವಾದ ವಸ್ತು ವಿನ್ಯಾಸ ಮತ್ತು ಭಾಷಿಕ ಶರೀರ ಎರಡೂ ನಾಯಕರಿಗೆ ಒಲಿದಿವೆ ಮತ್ತು ಸಿದ್ಧಿಸಿವೆ. ಈ ಕಥೆಗಳಲ್ಲಿ ಲೇಖಕರು ಬಳಸಿದ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಭಾಷೆ, ಪಾತ್ರಸೃಷ್ಟಿಯಲ್ಲಿನ ಹತೋಟಿ, ಘಟನೆಗಳನ್ನು ರೂಪಿಸುವ ಹಾಗೂ ನಿರ್ದೇಸಿಸುವ ರೀತಿ ಅತ್ಯುತ್ತಮವಾಗಿದೆ. ಇಲ್ಲಿ ನಿರೂಪಣೆಯಲ್ಲಿ ಹೊಸತನಕ್ಕೆ ಯತ್ನಿಸಿರುವ ಪ್ರಯೋಗಾತ್ಮಕ ನಿದರ್ಶನಗಳಿವೆ. ಒಂದು ಘಟನೆಯ ಹಿನ್ನೆಲೆಯಲ್ಲಿ ಅದಕ್ಕೆ ಸಂಬಧಿಸಿದ ಪಾತ್ರಗಳ ಗುಣ-ಸ್ವಭಾವಗಳನ್ನು ನವಿರಾಗಿ ಅನಾವರಣಗೊಳಿಸುವ ಪ್ರಯತ್ನಗಳೂ ಇವೆ. ಇಲ್ಲಿ ಚಿತ್ರಿತವಾಗಿರುವ ಪಾತ್ರಗಳಲ್ಲಿ ಸಹಜತೆ ಇದೆ. ವಾಸ್ತವ ಘಟನೆಗಳ ಹಿನ್ನೆಲೆಯಲ್ಲಿ ಪಾತ್ರಗಳ ನಡವಳಿಕೆಗಳನ್ನು ಮಮಕಾರವಿಲ್ಲದೆ ನಿರೂಪಿಸಲಾಗಿದೆ. ಇಲ್ಲಿನ ಕಥೆಗಳಿಗೆ ಲೇಖಕರ ಗ್ರಾಮೀಣ ಹಿನ್ನೆಲೆಯ ಶ್ರೀಮಂತ ಬಾಲ್ಯದ ಅನುಭವಗಳು ಸಾಮಗ್ರಿಯನ್ನು ಒದಗಿಸಿವೆ. ಈ ಕಾರಣದಿಂದಲೇ ಇಲ್ಲಿನ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ; ಓದುಗರಿಗೆ ಸುಲಭ ಪ್ರವೇಶ ಪಡೆಯುತ್ತವೆ, ಇಷ್ಟವಾಗುತ್ತವೆ ಮತ್ತು ಒಂದು ರೀತಿಯಲ್ಲಿ ಆಪ್ತವೂ ಆಗುತ್ತವೆ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…