ಮಿಂಚುಳ್ಳಿ ವಿಶೇಷ ಸಂದರ್ಶನ

ಮಿಂಚುಳ್ಳಿಯೊಂದಿಗೆ ಲೇಖಕಿ ಹೆಚ್.ಆರ್. ಸುಜಾತಾರವರ ಮಾತು

ಸಂದರ್ಶನ: ಸೂರ್ಯಕೀರ್ತಿ

1. ನೀವು ಬರವಣಿಗೆಯನ್ನು ಶುರು ಮಾಡಿದ್ದು ದಶಕದ ಇತ್ತೀಚಿಗೆ , ಇದಕ್ಕೆ ಕಾರಣ ಕೇಳಬಹುದಾ?

ಹೌದು, 2016ರಿಂದ ಬರವಣಿಗೆ ಶುರು ಮಾಡಿದೆ. ಕಾಲೇಜು ದಿನದಲ್ಲಿ ಒಂದೆರಡು ವರುಷ ಬರವಣಿಗೆ ಚುರುಕಾಗಿತ್ತು. ಮದುವೆ , ಸಂಸಾರದಲ್ಲಿ ಬರವಣಿಗೆ ಸಂಪೂರ್ಣ ಮುಳುಗಿಹೋಗಿ ಸಾಹಿತ್ಯ ಓದು ಮಾತ್ರ ಉಳಿದು ಹೋಗಿತ್ತು. ಕೆಲವು ಗಳಿಗೆಗಳಲ್ಲಿ ಬದುಕುವ ಅನಿವಾರ್ಯತೆ ಮತ್ತೇನೋ ಒಂದು ಆಧಾರವನ್ನು ಹಿಡಿದುಕೊಳ್ಳುತ್ತದೆ. ಹಾಗಾಗಿ ನನ್ನ ಆತ್ಮೀಯರ ಒತ್ತಾಸೆಯಿಂದ ಬರವಣಿಗೆಯ ಲೀಲೆ ನನ್ನ ಕೈ ಹಿಡಿತಕ್ಕೆ ದಕ್ಕಿತು ಅನ್ನಬಹುದು.

2. ನಿಮ್ಮ ಸಾಹಿತ್ಯದಲ್ಲಿ ಗ್ರಾಮೀಣ ಪ್ರದೇಶದ ಜನಜೀವನವನ್ನು ಕಾಣಬಹುದು. ಕುವೆಂಪು , ಶ್ರೀಕೃಷ್ಣ ಆಲನಹಳ್ಳಿ ಇತ್ಯಾದಿ ಲೇಖಕರು ಈ ದಾಖಲೀಕರಣದ ಸಾಹಿತ್ಯವನ್ನು ರಚಿಸಿದ್ದಾರೆ . ಇದು ನಿಮ್ಮ ಮೇಲೆ ಪ್ರಭಾವ ಬೀರಿದೆಯೇ?

ಹೌದು, ನನ್ನ ಓದಿಗೆ ದಕ್ಕಿದ ಗಂಭೀರ ಲೇಖಕರೆಲ್ಲರ ಪ್ರಭಾವ ನನ್ನ ಮೇಲಿದೆ. ಅದರಲ್ಲಿ ಗ್ರಾಮೀಣ ಬದುಕಿನ ಹಸಿಹಸೀ ಹಸಿರಿನ ಮಡಿಲು ನನಗೆ ಪ್ರಿಯವಾದ್ದು . ಯಾಕೆಂದರೆ ನನ್ನ ಮೂಲ ವ್ಯವಸಾಯ ಮಾಡುವ ವಕ್ಕಲುತನದ ಕುಟುಂಬ.

3. ಮಣಿಬಾಲೆ ಕೃತಿ, ಕನ್ನಡ ಕಾದಂಬರಿ ಲೋಕದ ಒಂದು ಕೊಡುಗೆಯಾಗಿದೆ. ಇದನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು?

ನಾನು ಅದನ್ನು ಓದುಗರಿಗೆ ಬಿಟ್ಟಿದ್ದೇನೆ . ಆದರೆ ಅದರ ಗಾತ್ರ ಹಾಗೂ ಪ್ರಾಕಾರ ನೋಡಿ ಕಾದಂಬರಿಯೆಂದು ವಿಮರ್ಶಕರು ತೀರ್ಮಾನಿಸಿದ್ದಾರೆ.

4. ನೀಲಿ ಮೂಗಿನ ನತ್ತು ರೈತಾಪಿ ಜೀವನದ ಮೂಲ ಸೆಲೆಯನ್ನು ಗುರುತಿಸುತ್ತದೆ. ಇಂಥಾ ಪ್ರಬಂಧಗಳನ್ನು ಬರೆಯಲು ಕಾರಣ?

ನಮ್ಮ ಪತ್ರಿಕಾ ಮಿತ್ರರೊಬ್ಬರು ಒಂದು ಅಂಕಣ ಕೊಟ್ಟು ಪ್ರತಿ ಭಾನುವಾರ ಬರೆಯಿರಿ ಎಂದರು. ನಾನು ನನ್ನೂರಿನ ಅನುಭವಗಳನ್ನು ಹೆಕ್ಕಿ ಬರೆದೆ. ಅದು ಅದರ ಪ್ರಾದೇಶಿಕ ಭಾಷೆ ಹಾಗೂ ಹಳ್ಳಿಯ ಸೊಗಡಿನಿಂದ ಓದುಗರನ್ನು ಸೆಳೆದುಕೊಂಡಿತು ಅನ್ನಬಹುದು.

5. ಪದುಮ ಪುರುಷ ಅನ್ನುವ ಒಂದು ಜಾನಪದ ಎಳೆಯನ್ನು ಹಿಡಿದುಕೊಂಡು ಆಧುನಿಕ ಕಥಾ ಪ್ರಪಂಚಕ್ಕೆ ಹೊಸ ರೀತಿಯಲ್ಲಿ ಕಥೆಗಳನ್ನು ಕೊಟ್ಟಿದ್ದೀರಿ? ನೀವು ಸ್ತ್ರೀವಾದಿ ಲೇಖಕಿ ಎಂದು ಗುರುತಿಸಿಕೊಳ್ಳಲು ಇಷ್ಟ ಪಡುವಿರಾ?

ಸ್ತ್ರೀವಾದ ಅನ್ನೋದಕ್ಕಿಂತ ಸ್ತ್ರೀ ಪರ ಆಲೋಚನೆ ಹೆಚ್ಚು ಅನ್ನೋದು ಸರಿ ಅನ್ನಿಸಬಹುದು. ಪದುಮಪುರುಷ ಎನ್ನುವುದು ಜಾನಪದ ಎಳೆ ನಿಜವಾದರೂ ಪದುಮ ಹಾಗು ಪುರುಷ ನಡುವಿನ ಆಕರ್ಷಣೆ , ಬವಣೆಯಾಗಿ ಬದಲಾಗುವುದನ್ನು ವರ್ತಮಾನದಲ್ಲಿಯೂ ತಪ್ಪಿಸಲಾಗಿಲ್ಲ. ಹಳೆ ಜಾಡಿನಲ್ಲಿ ಹೊಸನೀರು ಹರಿದಂತೆ. ನೀರು ಹರಿಯುವುದು ತಗ್ಗಿಗೆ ನಿಜ. ಆದರೆ ಅದರಲ್ಲಿ ಕಾಲಿಟ್ಟ ಹೆಣ್ಣು ಜಾರಿ ಹೋಗದಂತೆ ಎಲ್ಲ ಕಾಲದಲ್ಲೂ ಯೋಚಿಸಬೇಕಾದ್ದು, ಗಂಡಿನೊಡನೆ ಹುಟ್ಟು ಹಾಕಿ ದಡ ಸೇರುವೆಡೆಗೆ ಅವಳ ಎಚ್ಚರಿಕೆಯ ಕಣ್ಣಿರಬೇಕಾದ್ದು, ಅದಕ್ಕಾಗಿ ಹೆಣ್ಣಿನ ಅಗಾಧ ಪರಿಶ್ರಮದ ಅಗತ್ಯವಿದೆ.

6. ನಿಮ್ಮ ಕವಿತೆಗಳಲ್ಲಿ ಪ್ರಕೃತಿಯ ಹೂ, ನೆಲ, ಪ್ರೇಮ, ಪ್ರೀತಿ, ವಿರಹ, ಮರಗಳ ಬಗ್ಗೆ ವ್ಯಕ್ತವಾಗುತ್ತದೆ, ನಿಮ್ಮನ್ನು ಪ್ರಕೃತಿ ಕವಿಯೆಂದು ಕರೆಯಬಹುದೇ?

ಖಂಡಿತ, ಪ್ರಕೃತಿಯೇ ನಾವು. ನಮ್ಮೊಳಗೆ ಪ್ರಕೃತಿ. ನೆಲ ಜಲ ಹಸಿರಿಲ್ಲದೆ ಉಸಿರು ಸಾಧ್ಯವೇ? ಮಳೆಯಿಲ್ಲದೆ ಇಳೆ, ಒಲವಿಲ್ಲದೆ ಈ ಸಾವಯವ ಬೆಸುಗೆಯ ಬದುಕು ಇರಲು ಸಾಧ್ಯವೇ?

7. ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿರುವಿರಿ, ಇನ್ನೂ ಅಕಾಡೆಮಿ ಬೇರೆ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಆಶಿಸುತ್ತಿರಾ?

ಹಳೆ ಅನುಭವವನ್ನು ಇಟ್ಟುಕೊಂಡು ಇಂದಿಗೆ ಬೇಕಾದ ಕನ್ನಡ ಪ್ರೀತಿಯನ್ನು, ಸಾಹಿತ್ಯದ ಗೀಳನ್ನು ಜನರಿಗೆ ಹಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವತ್ತ ಸಾಗಬೇಕಿದೆ. ಜನಕ್ಕೆ ಬೇಕಾದ ಹಾಗೆ ಸಾಹಿತ್ಯ ಹಂಬಲ ಹುಟ್ಟು ಹಾಕುವುದರ ಜೊತೆಗೆ ಗುಣಮಟ್ಟದ ಬಗ್ಗೆಯೂ ಯೋಚಿಸಿದಾಗ ಹೆಚ್ಚು ಜನರನ್ನು ತಲುಪಬಹುದು.

8. ನಿಮ್ಮ ಮುಂದಿನ ಕೃತಿ?

ಸದ್ಯಕ್ಕೆ ಇದುವರೆಗೂ ಬರೆದಿರುವುದನ್ನು ಪ್ರಕಟಿಸಬೇಕಿದೆ. ನಂತರ ಮುಂದಿನದು.

9. ನಿಮ್ಮ ಸಾಹಿತ್ಯ ಬೆಳವಣಿಗೆ ಹುಟ್ಟಿಕೊಂಡ ಬಗೆ?

ಮನೆಯ ವಾತಾವರಣದಿಂದ ಪ್ರಭಾವಿ ಸಾಹಿತ್ಯದ ತಿಳುವಳಿಕೆ, ಸಿಕ್ಕಿದ್ದನ್ನೆಲ್ಲ ಓದುವ ಹಾಗು ಅದರಿಂದ ಪ್ರಭಾವ ಹೊಂದಿರುವುದೂ ಇದಕ್ಕೆ ಕಾರಣವಾಗಿದೆ.

10. ನಿಮ್ಮ ಕುಟುಂಬದ ಹಿನ್ನೆಲೆಯನ್ನು ಹೇಳುವುದಾದರೆ?

ತಂದೆತಾಯಿ, ಅತ್ತೆ ಮಾವ, ಗಂಡ ರೈತ ಕುಟುಂಬವಾದರೂ, ಅವರು ಹಂಬಲದಿಂದ ವಿದ್ಯೆಗೆ ನೀಡಿದ ಮಹತ್ವ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ.

11. ಸಾಹಿತ್ಯದಿಂದ ನಿಮಗೆ ಏನು ದೊರೆತಿದೆ?

ಕಷ್ಟ ಸುಖದಲ್ಲಿ ದಿಕ್ಕುತಪ್ಪದಂತೆ ಊರುಗೋಲಾಗಿ ಕಾಲಿರುವವರೆಗೂ ನಡೆಯಲೇಬೇಕು ಎಂಬುದನ್ನು ಕಲಿಸಿದೆ.

12. ಹೆಸರಾಂತ ಕಥೆಗಾರರಾದ ರಾಮಣ್ಣ ಟ್ರಸ್ಟಿನ ಅಧ್ಯಕ್ಷರಾಗಿದ್ದೀರಿ , ಮುಂದಿನ ಯೋಜನೆಗಳು ಏನೇನು ಇವೆ?

ರಾಮಣ್ಣ ಟ್ರಸ್ಟಿನ ಕಾರ್ಯಕ್ರಮಗಳು ಇದೆ ರೀತಿ ನಮ್ಮ ನಂತರವೂ ನಡೆದುಕೊಂಡು ಹೋಗುತ್ತದೆ ಎಂಬ ಭರವಸೆಯಿದೆ. ನಮ್ಮ ಕಮ್ಮಟಕ್ಕೆ ಬಂದು ಹೋದ ಶಿಬಿರಾರ್ಥಿಗಳಿಗೆ ಸಾಹಿತ್ಯದ ಬೇರು ತಳವೂರಿದ ಹೊಳಪು ನಮ್ಮನ್ನು ಮತ್ತಷ್ಟು ಉತ್ತಮವಾದ ಹೊಸ ಕಾರ್ಯಕ್ರಮ ರೂಪಿಸುವ ಹುರುಪನ್ನು ನೀಡುತ್ತದೆ ಎಂಬುದು ನಿಜ. ಮದುವೆ ಆದ ವರುಷದಿಂದ ನಮ್ಮ ಜೊತೆಯಾಗಿಯೇ ಇದ್ದ ರಾಮಣ್ಣನವರ ಕುಟುಂಬ ಹಾಗೂ ನಮ್ಮ ಟ್ರಸ್ಟಿನಲ್ಲಿರುವವರ ಎಲ್ಲರ ಸ್ನೇಹದ ಕೈ ಸೇರಿರುವುದರಿಂದ ಇಷ್ಟರಮಟ್ಟಿಗೆ ಟ್ರಸ್ಟಿನ ಕೆಲಸ ಆರಾಮಾಗಿ ಸಾಗುತ್ತಿದೆ.

-೧೬.೫.೨೫

SHANKAR G

Share
Published by
SHANKAR G

Recent Posts

2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಸಾಹಿತ್ಯ ಅಕಾದೆಮಿ ಅನುವಾದ ಪ್ರಶಸ್ತಿ 2025 ಸಾಹಿತ್ಯ ಅಕಾದೆಮಿಯು 1989 ರಿಂದ ಪ್ರತಿ ವರ್ಷ ಅಕಾದೆಮಿಯಿಂದ ಗುರುತಿಸಲ್ಪಟ್ಟ 24 ಭಾರತೀಯ…

55 years ago

ಬದಲಾಗಬೇಕಿದೆ ಸಮಾಜದ ಯುವಶಕ್ತಿ – ಲಿಖಿತ್ ಹೊನ್ನಾಪುರ

ಸಮಾಜದ ಭವಿಷ್ಯ ಯುವಶಕ್ತಿಯ ಅಂಗೈಯಲ್ಲಿ: ಯುವಶಕ್ತಿ ಎಂಬುದು ಸಾಮಾನ್ಯ ಶಬ್ದವಾದರೂ ಅದರೊಳಗಿನ ಅರ್ಥವು ಗಂಭೀರವಾದದ್ದು, ಭಾರವಾದದ್ದು. ಭಾರತವು ಅತ್ಯಂತ ಯುವ…

55 years ago

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

ಏಪ್ರಿಲ್ 2025 ಮಿಂಚುಳ್ಳಿ ಸಂಚಿಕೆ

55 years ago

ಚಿಗುರುತ್ತಿರುವ ಕಾವ್ಯದ ʼಹೊನಲುʼ – ನಾ ದಿವಾಕರ

(ದಿನಾಂಕ 6 ಏಪ್ರಿಲ್‌ 2025ರಂದು ಕೊಳ್ಳೇಗಾಲದ ಭಾಗ್ಯ ಗೌರೀಶ್‌ ಅವರ ʼಹೊನಲುʼ ಕವನ ಸಂಕಲನ ಬಿಡುಗಡೆಯ ಸಂದರ್ಭದ ಭಾಷಣದ ಲೇಖನ…

55 years ago