ಮಳೆ ಪ್ರಬಂಧಗಳು

ಆರಿದ್ರ ಇಲ್ಲಂದ್ರೆ ದರಿದ್ರ! – ಸೂರ್ಯಕೀರ್ತಿ

 

ಎಲ್ಲ ಮಳೆಗಳು ಗುಡುಗು,ಸಿಡಿಲು,ಮಿಂಚಿನೊಂದಿಗೆ ಬಂದರೆ ಈ ಮಳೆ ಏನೂ ಸದ್ದು ಮಾಡದೆ ಬಂದು ಸುರಿದು ಹೋಗುತ್ತದೆ. ಯಾವ ಗುಡುಗು,ಸಿಡಿಲು,ಮಿಂಚು ಕೂಡ ಇರದೆ ತಂಪನೆಯ ಗಾಳಿಯ ಬೀಸಿ ತನ್ನ ಪಾಡಿಗೆ ತಾನು ಮಳೆಗೆರೆದು ನೆಲಕ್ಕೆ ತಂಪಾಗಿಸುತ್ತದೆ. ಭರಣಿ,ಕೃತಿಕೆಗೆ ಬಿತ್ತಿದ ಹೆಸರು,ಉದ್ದುಕಾಳಿನಗಿಡಗಳು ಹೂವಾಗಲು ಈ ಮಳೆಯನ್ನು ಬೇಡುತ್ತವೆ! ಕೆಲವರು ಅಕ್ಕಡಿಸಾಲುಗಳ ಮಾಡಿಕೊಂಡಿರುವುದರಿಂದ ಈ ಮಳೆಗೆ ರಾಗಿ ಬಿತ್ತುತ್ತಾರೆ ಇದರ ಜೊತೆಗೆ ಬತ್ತದ ವಟ್ಲನ್ನು ಮಾಡಿ ಮಗೆ ಮಳೆಗೆ ನಾಟಿ ಮಾಡಲು ತಯಾರಾಗಿರುತ್ತಾರೆ. ಒಮ್ಮೆ ಅಜ್ಜನ ಕೇಳಿದೆ

‘ ಅಜ್ಜ ಯಾಕೋ ಈ ಮಳೆ ಗುಡ್ಲು,ಸಿಡ್ಲು ಎಂತದು ಬರಲ್ಲ, ಹಂಗೆಯ ಬಂದು ಸುರಿತದೆ ‘ ಅಂದೆ.

‘ ದೇವೇಂದ್ರ ರಂಬೆಯ ಜೊತೆ ಮಲಗವ್ನೆ, ಅದಿಕೆ ವರುಣದೇವ ಏನು ಸದ್ದು ಮಾಡಲ್ಲ, ಮಾಡಿದ್ರೆ ದೇವೇಂದ್ರನಿಗೆ ಸಿಟ್ಟು ‘ಅಂದ.

‘ ಅವಂಗೆ ಸಿಟ್ಟು ಬಂದ್ರೆ ಏನು ಮಾಡ್ಬಹುದು ಅಜ್ಜ ‘ಎಂದೆ.

‘ ಏನು ಮಾಡೋಕೆ ಆಗೋದು ಆ ಹಿಟ್ಟುಬಡಿಗನಿಗೆ, ಭೂಲೋಕದಲ್ಲಿ ಯಾರಾದ್ರೂ ಚೆಂದದ ಹುಡುಗಿಯರು ಕಂಡ್ರೆ ಸಾಕು ಬೇಕು ಅಂತಿದ್ದ, ಹಲ್ಕಟ್ ದೇವೇಂದ್ರ ಜೊಲ್ಲು ‘ ಎಂದ.

‘ ಅಂಗರೆ ದೇವರಲ್ಲಿಯೂ ಈ ರೀತಿ ಹಲ್ಕಟ್ ಇರ್ತಾರ ಅಜ್ಜ ‘ ಎಂದೆ

‘ ಯಾಕ್ ಇರ್ಬಾರದು, ದೇವರ ಕಲ್ಪನೆಯ ಬೇರೆಯೇ ಆದರೆ ಮನುಸ್ಯನಿಗೆ ಏನು ದಕ್ಕಿಸಿಕೊಳ್ಳಲು ಆಗುವುದಿಲ್ಲವೋ ಅದಕ್ಕೆ ದೇವರು ಎಂದು ಕರಕೊಂಡ. ಅಂಗೆ ನೋಡು ಈ ನೀರು,ನೆಲ,ಆಕಾಶ,ಬೆಂಕಿ,ವಾಯು ಇವೆಲ್ಲ ಮನುಸ್ಯನ ಕೈಗೆ ಸಿಗದಂತವು’ ಎಂದ.

‘ ಸಿಕ್ಬಿಟ್ರೆ ಏನಾಗುತ್ತೆ ಅಂತ’ ಮುಂದೆ ಚುಟಾಯಿಸಿದೆ.

‘ ಏನಾಯಿತದೆ ಸರ್ವನಾಶ ಆಯಿತದೆ, ಮಾಡಿರೋದು ಈಗ ಸಾಕಲ್ವ ‘ ಎಂದ.

ಈ ಮಳೆ ಗುಡುಗಬಾರದು ಗುಡುಗಿದರೆ ಮುಂದಿನ ಏಳು ಮಳೆಗಳ ಗರ್ಭ ಕರಗಿ ಹೋಗುತ್ತದೆ ಎಂದು ನಮ್ಮ ಜನಪದರು ತಮ್ಮ ಅನುಭವದ ಮೂಲಕ ತಿಳಿದುಕೊಂಡಿದ್ದರು. ಇದರ ವೈಜ್ಞಾನಿಕ ಹಿನ್ನೆಲೆ ಬೇರೆಯಿದ್ದರೂ ಆಯಾ ಮಳೆಗೆ ಒಂದೊಂದು ಕತೆಗಳು ದಂತಕತೆಗಳಂತೆ ಕಂಡರೂ ಅದರಲ್ಲಿ ಏನಾದರೊಂದು ಪ್ರಕೃತಿಯ ನೈಜತೆ ಇದ್ದೆ ಇರುತ್ತದೆ! ಜಪಾನ್ ದೇಶದಲ್ಲಿ ಮಳೆ ಬರದಿದ್ದರೆ ಮಳೆಗೊಂಬೆಗಳ ಮಾಡಿ ಮನೆಯ ಬಾಗಿಲಿಗೆ ಕಟ್ಟುತ್ತಾರೆ. ಇಲ್ಲಿಯೂ ಮಳೆಯ ದೇವತೆಗಳು ಇವೆ. ಆಯಾ ಪ್ರಾದೇಶಿಕ ಅನುಗುಣವಾಗಿ ಮಳೆ ಬೆಳೆ ವ್ಯತ್ಯಾಸವಿದ್ದರೂ ಜನಪದರ ನಂಬಿಕೆಗಳು ವಿಭಿನ್ನವಾಗಿವೆ! ಚೀನಾದ ಒಂದು ಹಳ್ಳಿಯಲ್ಲಿ ‘ Sky calling festival ‘ ಎಂಬ ಹಬ್ಬದಲ್ಲಿ ರೈತರು ಮಳೆಯನ್ನು ಹಾಡುಗಳ ಮೂಲಕ ಕರೆಯುತ್ತಾರೆ. ಮಳೆಯಲ್ಲಿ ನೆಂದು ಮಗ್ನರಾಗಿ ಕುಣಿಯುತ್ತಾರೆ,ಅಮೃತವೇ ಸುರಿಯಿತು ಎಂದೆಲ್ಲ ರೈತರ ಸಂಭ್ರಮವ ನೋಡಲು ಎರಡು ಕಣ್ಣುಗಳು ಸಾಲವು!

ಬತ್ತದ ವಟ್ಲು ಹಾಕಲು ಒಂದು ಕಡೆ ನೆಲವನ್ನು ಹಸನು ಮಾಡಿಕೊಂಡು ಗಟ್ಟಿ ಬೀಜಗಳಾದ ತೆನೆಗಳನ್ನು ಕತ್ತರಿಸಿಟ್ಟು ಸೊಸೈಟಿಯಿಂದ ಅಜ್ಜ ಬಿತ್ತನೆಬೀಜಗಳ ಕೊಂಡು ತರುತಿರಲಿಲ್ಲ. ನಾನು ಏನಾದರೂ ಈ ಬೀಜಗಳು ಅಷ್ಟು ಚೆನ್ನಾಗಿಲ್ಲ ದುಡ್ಡು ಕೊಡು ಸೊಸೈಟಿಗೆ ಹೋಗಿ ತರ್ತೀನಿ ಅಂದ್ರೆ ಸಾಕು ಎಗ್ಗರಿ ಬೈಯುತಿದ್ದ. ಒಂದೆರಡು ವರ್ಷಗಳ ನಂತರ ಏಕೆ ಅಜ್ಜ ಬೈಯುತಿದ್ದ ಎಂದೆಲ್ಲ ತಿಳಿದ ಮೇಲೆ ನಾನೆ ಬೀಜದ ತೆನೆಗಳ ಕೊಯ್ದು ಆರಿಸಿಯಿಡುತಿದ್ದೆ! ಒಂದು ಎಕರೆಗೆ ಇಪ್ಪರಿಂದ ಮೂವತ್ತು ಸೇರಿನಷ್ಟು ಬಿತ್ತನೆಯ ಬೀಜಗಳ ಒಂದು ರಾತ್ರಿ ನೀರಿಗೆ ಹಾಕಿ ಒಂದಿಷ್ಟು ಸುಣ್ಣ ಬೆರೆಸಿ, ಬೇವು, ಹೊಂಗೆಯ ಎಲೆಗಳನ್ನು ಕತ್ತರಿಸಿ ಏಳನೆ ದಿನ ಗದ್ದೆಯಲ್ಲಿ ಮೂರು ದಿಬ್ಬಗಳಂತೆ ಮಣ್ಣನ್ನು ಮಾಡಿಕೊಂಡು ಬಿತ್ತನೆ ಮಾಡುತಿದ್ದೆ. ನೀರು ಹಾಯಲು ಕಾಲುವೆಗಳಂತೆ ಮಾಡಿ ಕೊಕ್ಕರೆ,ನವಿಲು,ಹಾಲಕ್ಕಿಯಂತವುಗಳು ಮೇಯಲು ಬಾರದಂತೆ ಒಂದೆರಡು ಬೆದರುಗೊಂಬೆಗಳನ್ನು, ರೇಡಿಯೋದ ಕ್ಯಾಸೆಟ್ ಟೇಪನ್ನು ಗುಯ್ ಅನ್ನುವಂತೆ ಕಟ್ಟಿ ಬಿಡುತಿದ್ದೆ. ಹದಿನೈದು ದಿನಕ್ಕೆ ಪೈರುಗಳು ನೀಟಾಗಿ ಬೆಳೆದು ಗಾಳಿಯ ಸೋಂಕಿಗೆ ತಮ್ಮ ಪುಟ್ಟಾಣಿ ತಲೆಗಳ ದೂಗುತಿದ್ದವು.

ಒಂದು ದಿನ ಸೈಕಲ್ ಹತ್ತಿ ಗದ್ದೆಯ ಬಳಿ ಹೊರಟಾಗ ಈ ಆರಿದ್ರ ಮಳೆ ಬೆಳ್ಗೆ ಐದರಿಂದ ಶುರುವಾಗಿದ್ದು ಹತ್ತಾದರೂ ಬಿಡದೆ ‘ಪಟಪಟನೆ’ಸುರಿಯುತ್ತಲೇ ಇತ್ತು. ನಮದೊಂದು ಮಾವಿನಮರವಿತ್ತು ಯಾರಾದರೂ ಉದುರಿಸಿಕೊಂಡು ಹೋದರೋ ಎಂಬ ಭಯವೂ ನನಗಿತ್ತು. ಕೊಟ್ಟಿಗೆಯಲ್ಲಿ ಅಜ್ಜ ಗೊಣಗುತ್ತಲೇ ಇದ್ದ, ಅಜ್ಜಿ ಕುಂಬಳಕಾಯಿ ಪಲ್ಯ ಅಕ್ಕಿರೊಟ್ಟಿಯ ಮಾಡಿ ಗಟ್ಟಿ ಮೊಸರು ಬಿಟ್ಟು ಕೊಟ್ಟಳು ತಿಂದವನೆ ಎಮ್ಮೆ ಅಟ್ಟಿಕೊಂಡು ಗದ್ದೆಯ ಬಳಿ ಬಂದೆ. ಏನು ಮಳೆ ‘ಜುಯ್ಯೋ’ ಎಂದು ಸುರಿಯುತ್ತಲೇ ಇತ್ತು ಯಾವುದಕ್ಕೂ ಹೆದರದ ನನ್ನ ಎಮ್ಮೆಗಳು ‘ಉಯ್ ,ವಯ್ ‘ ಎಂದು ತಮ್ಮ ರಾಜನಡೆಗಳನ್ನು ಹಾಕುತ್ತಲೇ ಇದ್ದವು. ಎಮ್ಮೆಗಳ ಮುಂದೆ ಬಿಟ್ಟುಕೊಂಡು ಸೈಕಲ್ನಲ್ಲಿ ಅವುಗಳ ಹಿಂದೆ ‘ ಅರೆ, ವಯ್ ಉಯ್ ಅಚ್ಚ್ ಅಚ್ ನಡೀ ವಯ್ ‘ ಎಂದೆಲ್ಲ ಉಯಿಲಿಟ್ಟು ತಲೆಗೆ ಗೋಣಿಚೀಲವನ್ನು ಕಟ್ಟಿಕೊಂಡು ನಡುಗುವ ಕೈಗಳು ಸೈಕಲ್ನ ಹ್ಯಾಂಡಲನ್ನು ಕೂಡ ಅಲುಗಾಡಿಸುತ್ತ ಒಂದು ಕಿಲೋಮೀಟರ್ ದಾಟಿದ ಮೇಲೆ ನಮ್ಮ ಗದ್ದೆ ಸಿಗುತಿತ್ತು. ವತ್ತಾರೆಯೆ ಮಳೆಯಲ್ಲಿ ಎದ್ದು ಗುಂಡಣ್ಣ ಮತ್ತು ಅವನ ಹೆಂಡತಿ ಏನೋ ಮಾಡುವಂತೆ ತೋರಿತು. ಹತ್ತಿರ ಸಮೀಪಿಸುತಾ ಹೋದಂತೆ ‘ ಥೂ! ಕಿತ್ಹೋದ ಮಗ್ನೆ, ನಿನ್ ಮನೆ ಹಾಳಾಗ, ನಿನ್ ಮನೆ ಹಾಳಾಗ ‘ ಎಂದು ಕಿತ್ತಾಡುತಿದ್ದರು. ಒಂದೆರಡು ನಿಮಿಷ ನಿಂತುಕೊಂಡು ನೋಡಿದವನು ‘ ಯಾರ ಮನೆ ಹಾಳಾಗಬೇಕ್ರಯ್ಯಾ ‘ ಎಂದೆ.

ನನ್ನ ದನಿ ಕೇಳಿದ ಕೂಡಲೆ ಗುಂಡಮ್ಮ ‘ ನೋಡು ಹನುಮಂತ ಈ ಮುಟ್ಟಾಳ ಮಾಡೋ ಚಾಲಕು ಚಪ್ನ ‘ ಎಂದಳು.

‘ ಅದೇನು ಮಾಡ್ದ ಹೇಳು ಗುಂಡಕ್ಕ ‘ ಎಂದೆ ದೊಡ್ಡ ಮನುಷ್ಯನಂಗೆ.

‘ ನಾನು ಕಿತ್ತ ಮಾವಿನಕಾಯ್ನ,ಹಲಸಿನ ಕಾಯ್ನ,ತೆಂಗಿನ ಕಾಯ್ನ ನಂದು ಅಂತಾನೆ ಈ ಮೂರುವ’ ಎಂದಳು.

ಇದನ್ನು ಕೇಳಿದ ಗುಂಡಣ್ಣ ‘ ತುಳಿತೀನಿ ಈ ಗದ್ದೆಯಲ್ಲಿಯೇ ಕಂತ್ರಿನಾಯಿ’ಎಂದು ಅರಚಿದ.

ಗಂಡ ಹೆಂಡತಿಯರೆ ನಿನ್ ಮನೆ ಹಾಳಾಗ,ನಿನ್ ಮನೆ ಹಾಳಾಗ ಎಂದು ಕೂಗಾಡಿಕೊಂಡು ಕಿತ್ತಾಡುತಿರುವುದನ್ನು ನಾನು ನೋಡಿದ್ದು ಇದೆ ಮೊದಲಾಗಿದ್ದರು, ಅಜ್ಜಿ ಹೇಳಿದಂತೆ ನಾನು ಯಾರ ತಂಟೆ ತಕರಾರುಗಳಿಗೆ ಹೋಗದವನಾಗಿದ್ದೆ. ಗುಂಡಕ್ಕನ ಮುಖ,ಬಟ್ಟೆ ತಲೆ ಎಲ್ಲವೂ ಕೆಸರಾಗಿತ್ತು ಅವಳು ಬಿದ್ದು ಒದ್ದಾಡಿದ ಜಾಗಕ್ಕೆ ಮಳೆನೀರು ತುಂಬಿಕೊಂಡಿತ್ತು. ಗದ್ದೆಯ ಬದಿಯ ಮೇಲೆ ಕುಳಿತು ಕದ್ದು ತಂದ ಮಾವಿನಕಾಯಿ,ಹಲಸಿನಕಾಯಿ,ತೆಂಗಿನಕಾಯಿಗಳ ಮೆಳೆಗೆ ಬಚ್ಚಿಟ್ಟಳು. ಅದೇಕೋ ಗುಂಡಣ್ಣನ ಎಮ್ಮೆಗಳು ಕಣಿಯಾಕಿ ನಿಂತವು,ಒಂದಂತೂ ಮುಂದೆ ಹೋಗದೆ ಗದ್ದೆಯ ಬದಕ್ಕೊರಗಿ ನಿಂತಿತು, ಕೋಪಗೊಂಡವನು ‘ ಆ ರಂಡೆಯಂತೆ ಈ ರಂಡೆಯೂ’ ಎಂದು ಎಮ್ಮೆಗಳ ಹೆಗಲು ಬಿಚ್ಚಿ ನಮ್ಮ ಮಾವಿನಮರದ ಬಳಿಯೆ ಬಂದನು.

‘ಕಟಕಟನೆ’ ಅವನ ಹಲ್ಲುಗಳು ಗುಂಡಕ್ಕನ ನೋಡಿ ಕುಣಿಯುತಿದ್ದವು ಮಳೆ ಇನ್ನು ಬಿರುಸಾಯಿತು, ಹೊಟ್ಟೆ ಹಸಿಯಿತೋ ಏನೋ ಇಬ್ಬರೂ ಹೊಟ್ಟೆಹಿಡಿದುಕೊಂಡರು. ನಾನಿರುವೆ ಎಂದೋ ಏನೋ ಬಚ್ಚಿಟ್ಟ ಮಾವಿನಕಾಯಿ,ಹಲಸಿನಕಾಯಿಯ ಸುಲಿದು ತಿನ್ನಲಿಲ್ಲ ಇದನ್ನು ಅರ್ಥೈಸಿಕೊಂಡವನು ಇವರಿಬ್ಬರ ಬಿಟ್ಟು ಒಂದಷ್ಟು ದೂರ ಸರಿದೆ. ಅಷ್ಟರಲ್ಲಿ ಇಬ್ಬರೂ ಏನೋ ತಿನ್ನುವಂತೆ ಕಾಣುತಿತ್ತು ಅವರ ಎರಡು ಕೈಗಳು ಬಾಯಿಂದ ಸೊಂಟದಿಂದ ಮೇಲೆ ಕೆಳಗೆಯಾಡುತ್ತಲೇ ಇದ್ದವು. ಅಯ್ಯೋ ಅವರಿಗೆ ನನ್ನ ರೊಟ್ಟಿ ಬುತ್ತಿ ಕೊಟ್ಟುಬಿಡಬೇಕೆನಿಸಿದರು ಮತ್ತೆ ಎಲ್ಲಿ ಕಿತ್ತಾಡುವರೋ ಎಂದು ಯೋಚಿಸಿ ಮಳೆ ನಿಲ್ಲಲ್ಲಿ ಎಂದು ಮುತ್ತುಗದ ಮರದ ನೆರಳಿಗೆ ಬಂದು ನಿಂತೆ.ಮಳೆ ತುಸು ನಿರಂಮ್ಮಳವಾಯಿತು ತಂದಿದ್ದ ನಾಕು ರೊಟ್ಟಿಗಳು ಎರಡು ಅವರ ಪಾಲಾದವು!

SHANKAR G

Recent Posts

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago

ಯಾಗದ ಬಗೆಯನ್ನು ವರ್ಣಿಸಿದರು ವ್ಯಾಸರು – ಡಾ. ವಿಶ್ವನಾಥ ಎನ್ ನೇರಳಕಟ್ಟ

ಅಶ್ವಮೇಧ ಯಾಗದ ಕುದುರೆ ಹೇಗಿದ್ದರೆ ಚೆನ್ನ ಎಂಬ ಮಾತು ಮುನಿವರ್ಯರಿಂದ ಮೂಡಿಬಂತು. ಕುದುರೆ ಸ್ವಚ್ಛವಾಗಿರಬೇಕು. ಶ್ವೇತವರ್ಣದಿಂದ ಕಂಗೊಳಿಸುತ್ತಿರಬೇಕು. ನೋಡುವುದಕ್ಕೆ ಆಕರ್ಷಕವಾಗಿರಬೇಕು.…

56 years ago

ಆತ್ಮಸ್ಥೈರ್ಯದ ಬೆಳಕು ನಮ್ಮ ಮುಂದಿರಲಿ.. – ಲಿಖಿತ್ ಹೊನ್ನಾಪುರ

ನಿಲ್ಲುವುದೇ ಸಾವು ಚಲಿಸುವುದೇ ಬಾಳು – ಕುವೆಂಪು ನಮ್ಮ ಬದುಕಿನಲ್ಲಿ ಸಾಯುವುದೆಂದರೆ ಏನು? ಚಲನೆಯಿಲ್ಲದೆ ಕಾಲ ಹಾಯಿಸುವುದೇನು? ಬದಲಾವಣೆ, ಚಟುವಟಿಕೆ,…

56 years ago

ಜೂನ್ 2025 ಮಿಂಚುಳ್ಳಿ ಸಂಚಿಕೆ

ಜೂನ್ 2025 ಮಿಂಚುಳ್ಳಿ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ

56 years ago

ಧರ್ಮವೀರನ ಚಿತ್ತ ಖಿನ್ನತೆ – ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಆಗ ತಾನೇ ಕುರುಕ್ಷೇತ್ರ ಯುದ್ಧ ಮುಗಿದಿತ್ತು. ಆದರೆ ನನ್ನ ಅಗ್ರಜನೆನಿಸಿಕೊಂಡ ಧರ್ಮಜನ ಚಿತ್ತದೊಳಗೆ ಕಲಹವೊಂದು ಆರಂಭವಾಗಿತ್ತು. ಅದು ಧರ್ಮ ಅಧರ್ಮಗಳ…

56 years ago

ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ “ಶರ್ಮಿಷ್ಠೆ” – ನಾ ದಿವಾಕರ

ಏಕ ವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ರಂಗ ಸಂಪದ ಬೆಂಗಳೂರು ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು…

56 years ago